ಜ್ವಾಲೆ
ರಾಸಾಯನಿಕ ಶಕ್ತಿಯ ಬಿಡುಗಡೆಯ ಫಲವಾಗಿ ಕಣ್ಣಿಗೆ ಕಂಡುಬರುವಂತಾಗುವ ಅನಿಲ ಭಾಗ (ಫ್ಲೇಮ್). ದಹನಕ್ರಿಯೆ ಜ್ವಾಲೆಗೆ ಕಾರಣ. ದಹನ ಉಂಟಾಗಲು ಸ್ವಯಂಪೋಷಿತ ಉಷ್ಣವನ್ನು ಹೊರಚೆಲ್ಲುವ ರಾಸಾಯನಿಕ ಕ್ರಿಯೆ ಜರಗಬೇಕು. ಇದು ಸಾಮಾನ್ಯವಾಗಿ ಎರಡು ಘಟಕಗಳ ನಡುವೆ ನಡೆಯುತ್ತದೆ; ಒಂದು ದಹಿಸಬಲ್ಲ ಇಂಧನ, ಇನ್ನೊಂದು ದಹನವನ್ನು ಪೋಷಿಸುವ ಉತ್ಕರ್ಷಣಕಾರಿ. ಪೂರ್ವಭಾವಿಯಾಗಿ ಬೆರೆಸಿರುವ ಅನಿಲರೂಪದ ಎರಡು ವಸ್ತುಗಳ ಮಿಶ್ರಣವನ್ನು ಉದಾಹರಣೆಯನ್ನಾಗಿ ತೆಗೆದುಕೊಂಡು ಜ್ವಾಲೆ ತಲೆದೋರುವ ಬಗೆಯನ್ನು ಅರಿತುಕೊಳ್ಳಬಹುದು. ಇಂಥ ಮಿಶ್ರಣವನ್ನು ಮುಚ್ಚಿದ ಪಾತ್ರೆಯಲ್ಲಿಟ್ಟು ಕಾಸಿದಾಗ ರಾಸಾಯನಿಕ ಕ್ರಿಯೆ ಪ್ರಾರಂಭವಾಗಿ ಶಕ್ತಿ ಹೊರಬೀಳುತ್ತದೆ. ಇದು ಪಾತ್ರೆಯ ಗೋಡೆಗಳ ಮೂಲಕ ಹಾಯ್ದು ಪರಿಸರದಲ್ಲಿ ನಷ್ಟವಾಗುವ ಸಂದರ್ಭಗಳಲ್ಲಿ ರಾಸಾಯನಿಕ ಕ್ರಿಯೆ ಸುಗಮವಾಗಿ ಸಂಭವಿಸುವುದು. ಆದರೆ (ಘಟಕಗಳ ಮತ್ತು ಪಾತ್ರೆಯ ಸ್ವಭಾವವನ್ನು ಅವಲಂಬಿಸಿ) ಯಾವುದೇ ಒಂದು ಸಂಧಿಸ್ಥ ಸ್ಥಿತಿಯನ್ನು ದಾಟಿದಾಗ ಹೊರಬೀಳುವ ಉಷ್ಣದ ಪ್ರಮಾಣ ವಿನಷ್ಟವಾಗುವ ಪ್ರಮಾಣವನ್ನು ಮೀರುವುದರಿಂದ ವ್ಯವಸ್ಥೆಯ ಉಷ್ಣತೆ ತೀವ್ರವಾಗಿ ಏರುವುದು. ತತ್ಫಲವಾಗಿ ಕ್ರಿಯಾದರ ಹೆಚ್ಚಿ ಉಷ್ಣತೆ ಇನ್ನಷ್ಟು ಹೆಚ್ಚುತ್ತದೆ. ಹೀಗಾಗಿ ಕ್ರಿಯಾದರ ಸ್ವಯಂಪೋಷಿತವಾಗಿ ಬಹುವಾಗಿ ಉತ್ಕರ್ಷಿತವಾಗುತ್ತದೆ. ಪರಿಣಾಮ ಆಸ್ಫೋಟನೆ. ಆಸ್ಫೋಟನೆ ಮಿಶ್ರಣದ ಆದ್ಯಂತ ಪಡೆಯುವ ಕ್ರಿಯೆ. ಆದರೆ ಅನಿಲ ಮಿಶ್ರಣದ ಒಂದೆಡೆಯಲ್ಲಿ ಸ್ಥಳೀಯವಾಗಿ ದಹನ ನಡೆದರೆ ಆಸ್ಫೋಟನೆಯ ಅಲೆ ಮಾಧ್ಯಮದ ಉದ್ದಕ್ಕೂ ಹರಡುತ್ತದೆ. ಅನಿಲ ಮಿಶ್ರಣವನ್ನು ಉದ್ಧವಾದ ಒಂದು ಕೊವೆಯಲ್ಲಿಟ್ಟು ಒಂದು ಕೊನೆಯಿಂದ ದಹನವನ್ನು ಪ್ರಾರಂಭಿಸಿದರೆ ದಹನದ ಅಲೆ ಕೊಳವೆಯ ಉದ್ದಕ್ಕೂ ಹರಡುತ್ತದೆ. ಅಲೆಯೇ ಜ್ವಾಲೆ. ಇನ್ನಷ್ಟು ನಿಖರವಾಗಿ ಈ ಪದವನ್ನು ಕಾಂತಿಯುತ ಕ್ರಿಯಾ ಪ್ರದೇಶವನ್ನುಳ್ಳ ದಹನ ಅಲೆಗೆ ಮಾತ್ರ ಅನ್ವಯಿಸಲಾಗಿದೆ.

ಇಂಗಾಲಯುಕ್ತ, ಕಾರ್ಬನಿಕ ವಸ್ತುಗಳು ದಹನಶೀಲ ವಸ್ತುಗಳು. ಉದಾಹರಣೆಗೆ ಸೌದೆ, ಇದ್ದಲು, ಕರ್ಪೂರ, ಸೀಮೆಎಣ್ಣೆ ಇತ್ಯಾದಿ. ಇವು ಉರಿಯುವಾಗ ಸಾಮಾನ್ಯವಾಗಿ ಹಳದಿ ಬಣ್ಣದ ಜ್ವಾಲೆಯನ್ನು ಕಾಣುತ್ತೇವೆ. ಜ್ವಾಲೆಯಲ್ಲಿ ಧಾತುರೂಪಿ ಇಂಗಾಲದ ಕಣಗಳಿರುವುದೇ ಇದಕ್ಕೆ ಕಾರಣ. ಆಕ್ಸಿಜನ್ನಿನ ಸರಬರಾಜನ್ನು ಹೆಚ್ಚಿಸಿದಾಗ ಜ್ವಾಲೆ ನೀಲಿ ಬಣ್ಣಕ್ಕೆ ತಿರುಗುತ್ತದೆ. ಸಾಮಾನ್ಯವಾಗಿ ಜ್ವಾಲೆಯ ಬಣ್ಣ ಇಂಧನದ ಹಾಗೂ ಉತ್ಕರ್ಷಣಕಾರಿಗಳ ಪ್ರಕೃತಿಯನ್ನು ಅವಲಂಬಿಸುವುದು. ಜ್ವಾಲೆಯ ಉಷ್ಣತೆ ಇಂಧನ ಮತ್ತು ಉತ್ಕರ್ಷಣಕಾರಿಗಳ ನಡುವೆ ಆಗುವ ಮುಖ್ಯ ಕ್ರಿಯೆಯಿಂದಲ್ಲದೆ ಪಾಶ್ರ್ವಕ್ರಿಯೆಗಳಿಂದಲೂ ಪ್ರಭಾವಿತವಾಗುತ್ತದೆ. ಆಕ್ಸಿಜನ್ನಿನಲ್ಲಿ ಹೈಡ್ರೋಜನ್ ಉರಿಯುವ ಸಂದರ್ಭದಲ್ಲಿ ಪಾಶ್ರ್ವಕ್ರಿಯೆಗಳು ಪ್ರಾಯಿಕವಾಗಿ ನಡೆಯುವುದೇ ಇಲ್ಲ. ಮುಂದಿನ ಪಟ್ಟಿಯಲ್ಲಿ ಹಲವು ಸರ್ವ ಸಾಧಾರಣ ಇಂಧನಗಳ ಜ್ವಾಲೆಗಳ ಉಷ್ಣತೆಗಳನ್ನು ಕೊಡಲಾಗಿದೆ :

ಇಂಧನ
ಉಷ್ಣತೆ (ಅಯಲ್ಲಿ

ವಾಯುವಿನಲ್ಲಿ
ಆಕ್ಸಿಜನ್ನಿನಲ್ಲಿ

ಪ್ರೋಪೇನ್
1925
2800

ಬ್ಯೂಟೇನ್
1900
2900

ಹೈಡ್ರೊಜನ್
2100
2980

ಅಸೆಟಿಲೀನ್
2200
3050

ಸಯನೋಜನ್
….
4550

ಜ್ವಾಲೆಗಳ ಅಧಿಕ ಉಷ್ಣತೆಯ ಲಾಭವನ್ನು ಪಡೆದು ಹಲವಾರು ಔದ್ಯೋಗಿಕ ಉಪಯೋಗಗಳು ಹುಟ್ಟಿಕೊಂಡಿವೆ. ಸುಲಭವಾಗಿ ದ್ರವಿಸದ ಲೋಹಗಳನ್ನು ನಿಷ್ಕಾಸಿಸಲು, ಲೋಹಗಳನ್ನು ಕತ್ತರಿಸಲು ಹಾಗೂ ಬೆಸೆಯಲು, ಸಿಮೆಂಟನ್ನು ತಯಾರಿಸಲು, ವಿದ್ಯುತ್ತನ್ನು ಉತ್ಪಾದಿಸಲು, ಇತ್ಯಾದಿ, ಅನೇಕ ಉದ್ಯಮಗಳಲ್ಲಿ ಜ್ವಾಲೆಗಳ ಉಪಯೋಗ ಉಂಟು. ಜೆಟ್ ವಿಮಾನಗಳ ಹಾಗೂ ರಾಕೆಟ್ಟುಗಳ ಚಾಲನೆಗೆ ಜ್ವಾಲೆಗಳು ಅವಶ್ಯ. ಈ ವ್ಯವಸ್ಥೆಗಳಲ್ಲಿ ಇಂಧನಗಳು ಹೆಚ್ಚಿನ ಉಷ್ಣತೆಯಲ್ಲಿ ಉರಿದು ಕೊಳವೆಯಿಂದ ಆಚೆಗೆ ಬಹುವೇಗದಿಂದ ಪ್ರವಹಿಸುತ್ತವೆ. ಪ್ರವಾಹದ ಚಲನೆಗೆ ವಿರುದ್ಧ ದಿಶೆಯಲ್ಲಿ ರಾಕೆಟ್ಟು ಮತ್ತು ಜೆಟ್ ವಿಮಾನಗಳು ಹಾರುತ್ತವೆ. ರಾಕೆಟ್ಟುಗಳಲ್ಲಿ ಅನೇಕ ಬಗೆಯ ದ್ರವ-ದ್ರವ, ಘನ-ದ್ರವ ವ್ಯವಸ್ಥೆಗಳನ್ನೂ ಜೆಟ್ ವಿಮಾನಗಳಲ್ಲಿ ಸೀಮೆಎಣ್ಣೆಯನ್ನೂ ಉರಿಸಿ ಜ್ವಾಲೆಯುನ್ನು ಪಡೆಯಲಾಗುತ್ತಿದೆ. ಕಲ್ಲಿದ್ದಲಿನಿಂದ ಪಡೆಯುವ ಅನಿಲವನ್ನು ದೀಪಗಳಿಗೆ ಇಂಧನವನ್ನಾಗಿ ಬಳಸುವುದಲ್ಲದೆ ಮನೆಗಳಲ್ಲಿ ಅಡುಗೆಗೂ ಬಳಸುತ್ತಾರೆ. ಈಚಿನ ದಿವಸಗಳಲ್ಲಿ ಪೆಟ್ರೋಲಿಯಮ್ ಕೈಗಾರಿಕೆಯ ಅಂಗವಾಗಿ ದೊರೆಯುವ ದ್ರವಾನಿಲವನ್ನು ಅಡುಗೆಗೆ (ಬರ್ಷೇನ್, ಇಂಡೇನ್ ಇತ್ಯಾದಿ) ಬಳಸುತ್ತಿದ್ದಾರೆ. ವಿಶ್ಲೇಷಣ ಪ್ರಯೋಗಶಾಲೆಗಳಲ್ಲಿ ಜ್ವಾಲೆಯ ಸಹಾಯದಿಂದ ಅತ್ಯಲ್ಪ ಪ್ರಮಾಣದ ಲೋಹಗಳನ್ನು ಕೂಡ ಪತ್ತೆಮಾಡುವುದು ಸಾಧ್ಯವಾಗಿದೆ. ಬುನ್ಸೆನ್ ಜ್ವಾಲಕದಲ್ಲಿ ಸ್ಥಿರವಾದ ಜ್ವಾಲೆಯನ್ನು ಪಡೆದು ಲೋಹದ ದ್ರಾವಣವನ್ನು ಸಿಂಪಡಿಸಿದಾಗ ಆಯಾ ಲೋಹಕ್ಕೆ ವಿಶಿಷ್ಟವಾದ ಬಣ್ಣ ಕಂಡುಬರುತ್ತದೆ. ಉದಾಹರಣೆಗೆ ಸೋಡಿಯಮ್ ಲೋಹ ಹಳದಿ ಬಣ್ಣವನ್ನು, ಕ್ಯಾಲ್ಸಿಯಮ್ ಇಟ್ಟಿಗೆ ಕೆಂಪು ಬಣ್ಣವನ್ನು, ಬೇರಿಯಮ್ ತಿಳಿಹಸಿರು ಬಣ್ಣವನ್ನು ಕೊಡುತ್ತವೆ. ಈ ಗುಣದ ಲಾಭವನ್ನು ಪಡೆದು ಸೋಡಿಯಮ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಮ್ ಲೋಹಗಳನ್ನು ಜ್ವಾಲೆ ರೋಹಿತ ದ್ಯುತಿಮಾಪಕದ ಸಹಾಯದಿಂದ ಅತ್ಯಲ್ಪ ಪ್ರಮಾಣದಲ್ಲಿ ಪರಿಮಾಣಾತ್ಮಕವಾಗಿ ಅಳೆಯಬಹುದು.
(ಎಚ್.ಎಸ್.ಎಸ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ